ಇಡಾಹೊ -
ಅಮೆರಿಕ ಸಂಯುಕ್ತ ಸಂಸ್ಥಾನದ ಪರ್ವತಮಯ ರಾಜ್ಯ. ಅಮೆರಿಕದ ಇಂಡಿಯನರ ರೀತ್ಯಾ ಇಡಾಹೊ ಎಂದರೆ ಪರ್ವತವಜ್ರ. ವಜ್ರರಾಜ್ಯವೆಂದು ಇದನ್ನು ಕರೆಯುವುದು ಸಾಮಾನ್ಯರ ರೂಢಿ. ಹೆಚ್ಚಾಗಿ ಕೊಲಂಬಿಯ ನದಿಯ ಜಲಾನಯನ ಭೂಪ್ರದೇಶದಿಂದಲೇ ಕೂಡಿರುವ ಈ ರಾಜ್ಯದ ಉತ್ತರಕ್ಕೆ ಬ್ರಿಟಿಷ್ ಕೊಲಂಬಿಯ, ಪೂರ್ವಕ್ಕೆ ಮಾಂಟಾನ ಮತ್ತು ವ್ಯೊಮಿಂಗ್, ದಕ್ಷಿಣಕ್ಕೆ ಯೂಟಾ ಮತ್ತು ನೆವಾಡ, ಪಶ್ಚಿಮಕ್ಕೆ ಒರೆಗಾನ್ ಮತ್ತು ವಾಷಿಂಗ್ಟನ್ ಇವೆ. ಇದರ ವಿಸ್ತೀರ್ಣ 83,557 ಚ.ಮೈ. ಈ ರಾಜ್ಯದ ದಕ್ಷಿಣದಲ್ಲಿರುವ ಸ್ನೇಕ್ ನದಿಯ ಕಣಿವೆಯಲ್ಲಿ ಆಳವಾದ ಕಮ್ಮರಿಗಳೂ ಅಬ್ಬಿಗಳೂ ಹೇರಳ. ಉತ್ತರದಲ್ಲಿ ಸೆಲ್‍ಕರ್ಕ್ ಪರ್ವತವೂ ಕೋರ್ ಡಿಅಲಿನ್ ಪರ್ವತವೂ ಇದೇ ಹೆಸರಿನ ಸರೋವರವೂ ಇವೆ. ಉತ್ತರ ದಕ್ಷಿಣ ಪ್ರದೇಶಗಳನ್ನು ಪ್ರತ್ಯೇಕಿಸುವಂತೆ ಮಧ್ಯದಲ್ಲಿ ಕ್ಲಿಯರ್‍ವಾಟರ್ ಪರ್ವತ. ಪಶ್ಚಿಮದಲ್ಲಿ ಸೆವೆನ್ ಡೆವಿಲ್ಸ್ ಪರ್ವತವೂ ಪೂರ್ವದ ಎಲ್ಲೆಯ ಬಳಿಯಲ್ಲಿ ಬಿಟ್ಟರ್‍ರೂಟ್ ಪರ್ವತಶ್ರೇಣಿ. ಇದು ಮರುಭೂಮಿಗಳಿಂದಲೂ ಮೈದಾನಗಳಿಂದಲೂ ಅಗ್ನಿಶಿಲೆಯ ನೆಲದಿಂದಲೂ ಕೂಡಿದ ಪ್ರದೇಶ. ಸೈಲೂರಿಯನ್‍ನಿಂದ ಪ್ಲಿಯೊಸೀನ್ ವರೆಗೆ ಭೂ ಇತಿಹಾಸದ ಎಲ್ಲ ಯುಗಗಳಿಗೆ ಸಂಬಂಧಿಸಿದ ಭೂರಚನೆಯನ್ನೂ ಇಲ್ಲಿ ಕಾಣಬಹುದು.

ವಾಯುಗುಣ, ಸಸ್ಯವರ್ಗ : ಬೇಸಗೆಯಲ್ಲಿ ಆಗ್ನೇಯ ಭಾಗದ ಸ್ನೇಕ್ ಕಣಿವೆ ಪ್ರದೇಶದಲ್ಲಿ ಅತಿ ಹೆಚ್ಚಿನ ಸರಾಸರಿ ಉಷ್ಣತೆಯಿರುತ್ತದೆ. 70º ಇದು ಫ್ಯಾ. ಗಿಂತಲೂ ಅಧಿಕ. ಇತರ ತಗ್ಗು ಪ್ರದೇಶಗಳಲ್ಲಿ 60º ಫ್ಯಾ. ಗಿಂತ ಹೆಚ್ಚಿನ ಸರಾಸರಿ. ಪರ್ವತ ಪ್ರದೇಶದ ಸರಾಸರಿ ಉಷ್ಣತೆ 55º ಫ್ಯಾ. ಗಿಂತ ಕಡಿಮೆ. ಚಳಿಗಾಲದಲ್ಲಿ ಪರ್ವತಪ್ರದೇಶದ 20º ಉಷ್ಣತೆ ಫ್ಯಾ. ಗಿಂತ ಕಡಿಮೆ. ತಗ್ಗಿನ ನೆಲದಲ್ಲಿ 20º ಯಿಂದÀ 30º ಫ್ಯಾ. ಕೊರೆಯುವ ಹಿಮ ಬೀಳದಿರುವ ದಿನಗಳ ಸಂಖ್ಯೆ ವರ್ಷಕ್ಕೆ ಸರಾಸರಿಯಲ್ಲಿ 150ಕ್ಕಿಂತ ಕಡಿಮೆ. ಪರ್ವತಪ್ರದೇಶದಲ್ಲಿ ಇದು ತೊಂಬತ್ತಕ್ಕಿಂತ ಕಡಿಮೆ.

ರಾಕಿ ಪರ್ವತಶ್ರೇಣಿಯ ಪ್ರದೇಶದ ಬಹುಭಾಗದಲ್ಲಿ 30 ಅಂಗುಲಕ್ಕಿಂತ ಹೆಚ್ಚು ಮಳೆ. ಕೆಲವು ಪ್ರದೇಶದಲ್ಲಿ 40 ಅಂಗುಲಕ್ಕೂ ಹೆಚ್ಚು. ಪಶ್ಚಿಮಕ್ಕೂ ದಕ್ಷಿಣಕ್ಕೂ ಹೋದಂತೆಲ್ಲ ಮಳೆ ಕಡಿಮೆಯಾಗುತ್ತದೆ. ತೀರ ಪಶ್ಚಿಮದಲ್ಲಿ ಕನಿಷ್ಠ ಮಳೆಯ ಪ್ರಮಾಣ 20 ಅಂಗುಲ; ತೀರ ದಕ್ಷಿಣದಲ್ಲಿ 10 ಅಂಗುಲ. ಹಿಮಾವೃತ ದಿನಗಳ ಸಂಖ್ಯೆ ವರ್ಷಕ್ಕೆ 90 ರಿಂದ 30ರ ವರೆಗೆ ಪ್ರದೇಶಾನುಗುಣವಾಗಿ ವ್ಯತ್ಯಾಸವಾಗುತ್ತ ಹೋಗುತ್ತದೆ. ವರ್ಷದ ಎಲ್ಲ ಋತುಗಳಲ್ಲೂ ಮಳೆಯಾಗುತ್ತದೆ. ಆದರೆ ಪಶ್ಚಿಮ ಭಾಗದಲ್ಲಿ ಬೇಸಗೆಯಲ್ಲಿ ಕನಿಷ್ಠ ಪರಿಮಾಣ.

ಉಷ್ಣತೆ ಹಾಗೂ ನೆಲದೆತ್ತರಕ್ಕೆ ಅನುಗುಣವಾಗಿ ಇಡಾಹೊ ರಾಜ್ಯದ ಸ್ವಾಭಾವಿಕ ಸಸ್ಯವರ್ಗ ವ್ಯತ್ಯಾಸವಾಗುತ್ತದೆ. ಸ್ನೇಕ್ ನದಿಯ ಮೈದಾನದಲ್ಲೂ ಅದರ ದಕ್ಷಿಣಕ್ಕೂ ಮರುಭೂಮಿಯ ಕುರುಚಲು ಗಿಡಗಳು ಸಾಮಾನ್ಯ, ಉತ್ತರದ ಪರ್ವತ ಪ್ರದೇಶದ ಮೇಲೆ ಗುತ್ತಿಹುಲ್ಲಿನ ಪಶ್ಚಿಮ ಸೆರಗೂ ದಾರುವೃಕ್ಷಗಳ ಒಡಲೂ ಲಾರ್ಜ್, ಫರ್, ಸ್ಪ್ರೂಸ್ ಮರಗಳ ಬೊಟ್ಟುಗಳೂ ಇವೆ. ಕೆಲವು ಕಾಡುಗಳು ವಾಣಿಜ್ಯದೃಷ್ಟಿಯಿಂದ ಮುಖ್ಯ.

ವ್ಯವಸಾಯ, ಖನಿಜ, ಕೈಗಾರಿಕೆ: ದನ ಕುರಿಗಳ ಮೇವು ದೊರಕುವ ಜಮೀನು ಇಡಾಹೋದಲ್ಲಿ ಧಾರಾಳವಾಗಿದೆ. ಸಾಂದ್ರಬೇಸಾಯ ನಡೆಯುವಲ್ಲಿ ಜನರು ಬೆಳೆಯ ಜೊತೆಗೆ ದನ ಕುರಿ ಹಂದಿಗಳನ್ನೂ ಸಾಕುತ್ತಾರೆ. ಸ್ನೇಕ್ ನದಿಯ ಕಣಿವೆಯಲ್ಲಿ, ಮುಖ್ಯವಾಗಿ ರಾಜ್ಯದ ಆಗ್ನೇಯ ದಕ್ಷಿಣ-ಮಧ್ಯ ಹಾಗೂ ಪಶ್ಚಿಮ ಕಣಿವೆಯಲ್ಲಿ, ಹಾಗೂ ಉತ್ತರದ ಪಶ್ಚಿಮ ಬದಿಯ ಪ್ರದೇಶದಲ್ಲಿ ಬೇಸಾಯದ ಜಮೀನುಗಳು ಅಧಿಕ. ರಾಜ್ಯದ ದಕ್ಷಿಣದಲ್ಲಿ ನೀರಾವಿಯೂ ಸಾಮಾನ್ಯ. ನೀರಾವರಿ ವ್ಯವಸ್ಥೆಗೆ ಒಳಪಡದ ಜಮೀನುಗಳಲ್ಲಿ ಗೋಧಿಯ ಬೆಳೆಯೇ ಹೆಚ್ಚು; ಓಟ್ಸ್, ಬಾರ್ಲಿಗಳೂ ಬೆಳೆಯುತ್ತವೆ. ನೀರಾವರಿಯ ನೆಲಗಳಲ್ಲಿ ಕುದುರೆ ಮಸಾಲೆಯ ಸೊಪ್ಪಿನ (ಆಲ್ಫಾಲ್ಫ) ಬೆಳೆ ಅಧಿಕ. ದಕ್ಷಿಣ-ಮಧ್ಯ ಹಾಗೂ ದಕ್ಷಿಣ-ಪೂರ್ವ ಜಿಲ್ಲೆಗಳಲ್ಲಿ ಸಕ್ಕರೆಯ ಬೀಟ್ ಹಾಗೂ ಆಲೂಗೆಡ್ಡೆಯ ಬೆಳೆ ಹೆಚ್ಚು. ಅಲ್ಲಲ್ಲಿ ಸೇಬನ್ನೂ ಬೆಳೆಯುವುದುಂಟು. ಗೋಧಿ, ಬೆಣ್ಣೆ, ಚೀಸ್, ಉಣ್ಣೆ-ಇವು ಮುಖ್ಯ ಉತ್ಪನ್ನಗಳು.

ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಗಣಿಗಾರಿಕೆ ಪ್ರಧಾನವಾಗಿದೆ. ಕೋರ್ ಡಿಅಲಿನ್‍ನಲ್ಲಿ ಸೀಸ ಬೆಳ್ಳಿಗಳೂ ಸ್ವಲ್ಪಮಟ್ಟಿಗೆ ಸತುವೂ ಸಿಗುತ್ತವೆ. ಚಿನ್ನ ತಾಮ್ರಗಳೂ ತಕ್ಕಮಟ್ಟಿಗೆ ಮುಖ್ಯ.
ಜನ, ಸರ್ಕಾರ, ಇತಿಹಾಸ : 1967ರಲ್ಲಿ ಇಡಾಹೊ ರಾಜ್ಯದ ಜನಸಂಖ್ಯೆ ಸುಮಾರು 6,99,000 ಇತ್ತೆಂದು ಅಂದಾಜು ಮಾಡಲಾಗಿದೆ. ಇದು 1950ರಲ್ಲಿ 5,88,637 ಇತ್ತು. 1940 ರಿಂದ 1950ರ ವರೆಗಿನ ದಶಕದಲ್ಲಿ ಇದು 12.1% ರಷ್ಟು ಹೆಚ್ಚಿತು. ಇಲ್ಲಿನ ಜನರಲ್ಲಿ ಬಿಳಿಯರಲ್ಲದವರು ಬಹು ಕಡಿಮೆ. ಬೊಯಿಸ್, ಪೊಕಟೆಲ್ಲೊ, ಇಡಾಹೊ ಫಾಲ್ಸ್ ಇವು ಮುಖ್ಯವಾದ ಪಟ್ಟಣಗಳು. ರಾಜ್ಯದಲ್ಲಿ ಮಾರ್ಮನ್ ಚರ್ಚು ಪ್ರಧಾನ.

ಇಡಾಹೊ ರಾಜಧಾನಿ ಬೊಯಿಸ್. ಗೌರ್ನರು ಇದರ ಅಧಿಪತಿ. ರಾಜ್ಯದ ವಿಧಾನಮಂಡಲದ ಮೇಲ್ಮನೆಯಾದ ಸೆನೆಟಿಗೆ 44 ಮಂದಿ ಸದಸ್ಯರೂ ಕೆಳಮನೆಯಾದ ಪ್ರತಿನಿಧಿ ಸಭೆಗೆ (ಹೌಸ್ ಆಫ್ ರೆಪ್ರೆಸೆಂಟೆಟಿವ್ಸ್) 50 ಸದಸ್ಯರೂ ಚುನಾಯಿತರಾಗುತ್ತಾರೆ. ಇವರ ಅಧಿಕಾರಾವಧಿ ಎರಡು ವರ್ಷ. ಅಮೆರಿಕ ಸಂಯುಕ್ತ ಸಂಸ್ಥಾನದ ಕೇಂದ್ರ ವಿಧಾನ ಮಂಡಲವಾದ ಕಾಂಗ್ರೆಸ್ಸಿನಲ್ಲಿ ಮೇಲ್ಮನೆಗೆ ಇಬ್ಬರೂ ಕೆಳಮನೆಗೆ ಇಬ್ಬರೂ ಪ್ರತಿನಿಧಿಗಳು ಆಯ್ಕೆಯಾಗುತ್ತಾರೆ.

ಇಡಾಹೊ ಮೊದಲಿಗೆ ಒರೆಗಾನಿನ ಭಾಗವಾಗಿತ್ತು. 1863ರಲ್ಲಿ ರಾಜಕೀಯವಾಗಿ ಇಡಾಹೊ ಪ್ರದೇಶ ಖಚಿತವಾಗಿ ರೂಪುಗೊಂಡಿತು. ಇದರ ಈಗಿನ ಎಲ್ಲೆಗಳು 1868ರ ವರೆಗೂ ನಿಷ್ಕರ್ಷೆಯಾಗಿರಲಿಲ್ಲ. 1860ರಲ್ಲಿ ಇಲ್ಲಿ ಚಿನ್ನ ಪತ್ತೆಯಾದಾಗಿನಿಂದ ಇದರ ಇತಿಹಾಸ ಪ್ರಾರಂಭ. 1890ರಲ್ಲಿ ಇದು ಪ್ರತ್ಯೇಕ ರಾಜ್ಯಘಟಕವಾಗಿ ಅಮೆರಿಕ ಸಂಯುಕ್ತ ಸಂಸ್ಥಾನದ ಒಕ್ಕೂಟದಲ್ಲಿ ಸೇರ್ಪಡೆಯಾಯಿತು.											

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ